ಕಾಜವಾರ

  ವಿಷಕರ ಕಹಿ ಮದ್ದು ದೊರೆವ ಬೀಜಬಿಡುವ ಸಸ್ಯ (ಸ್ಟ್ರಿಕ್ನಾಸ್‍ನಕ್ಸ್‍ವೋಮಿಕ). ಲೊಗಾನಿಯೇಸೀ ಕುಟುಂಬಕ್ಕೆ ಸೇರಿದೆ. ಇದನ್ನು ಕಾಸರ. ಕಾಸರ್ಕ, ಇಟ್ಟಿ, ಮುಷ್ಟಿ, ಕಾಂಜಿರ ಎನ್ನುವುದೂ ಉಂಟು. ಭಾರತ, ಬರ್ಮ, ಥೈಲ್ಯಾಂಡ್, ಇಂಡೋಚೀನ, ಉತ್ತರ ಆಸ್ಟ್ರೇಲಿಯಗಳಲ್ಲಿ ಈ ಗಿಡ ಬೆಳೆಯುತ್ತದೆ. ಹಿಂದೆ ಮದ್ದುಗಳಲ್ಲಿ ಶಕ್ತಿವರ್ಧಕವಾಗಿ ಬಳಕೆಯಲ್ಲಿತ್ತು. ಇದಕ್ಕಾಗಿ ಪ್ರಾಣಿಗಳ ವೈದ್ಯದಲ್ಲಿ  ಮಾತ್ರ ಈಗಲೂ ಕೊಡುವುದುಂಟು. ಬಟ್ಟುಗಳಂತಿರುವ ಇದರ ಬೀಜಗಳಲ್ಲಿ ಮುಖ್ಯವಾಗಿ ಸ್ಟ್ರಿಕ್ನೀನ್, ಬ್ರೂಸೀನ್ ಸಸ್ಯಕ್ಷಾರ (ಆಲ್ಕಲಾಯಿಡ್ಸ್) (ಸುಮಾರು 1-2% ಪ್ರಮಾಣ). ಇವೆರಡರ ಗುಣಗಳೂ ಒಂದೇ ಆದರೂ ಮೊದಲಿನದು ಜೋರಿನದು. ಪ್ರಯೋಗ ಪ್ರಾಣಿಗೆ ಕೊಟ್ಟು ನೋಡಿದರೆ ಇದರ ಪ್ರಭಾವ ಮುಖ್ಯವಾಗಿ ಬೆನ್ನುಹುರಿಯ ಮೇಲೆ ತೋರುತ್ತದೆ. ಯಾವುದೇ ತಿನ್ನುವ ಬೀಜವೆಂದು ಮಕ್ಕಳು ಸೇವಿಸಿ ವಿಷವೇರಿದಾಗ ಎದೆಬಿಗಿದಂತಾಗಿ ಇದ್ದಕ್ಕಿದ್ದಹಾಗೆ ಸೆಟೆತ (ಕ್ರಾನಿಕ್ ಕನ್ವಲ್ಷನ್) ಬಿಟ್ಟು ಬಿಟ್ಟು ಬರುತ್ತಿದ್ದು ರೋಗಿ ಸುಸ್ತಾಗುವನು. ಸೆಟೆಬೇನೆಯಲ್ಲೂ (ಟೆಟನಸ್, ಧನುರ್ವಾಯು) ಹೀಗೇ ಸೆಳವು ಇರುವುದಾದರೂ ಇದರಲ್ಲಿ ಗಾಯ, ಶಸ್ತ್ರಕ್ರಿಯೆ ಆಗಿರದು; ಅಲ್ಲದೆ, ಸೆಳವು ಬಿಟ್ಟು ಬಿಟ್ಟು ಬರುವುದು. ದವಡೆÉಬೀಗು (ಲಾಕ್ ಜಾ) ಕೊನೆಯ ಹಂತದಲ್ಲಿ ಕಾಣಿಸಿಕೊಳ್ಳುತ್ತದೆ. ಕಾಜವಾರ ಕಹಿಯಾದ್ದರಿಂದ ಕೆಲವೇಳೆ ಹಸಿವನ್ನು ಹುಟ್ಟಿಸಲು ಮದ್ದಾಗಿ ಕೊಡುವುದು ರೂಢಿ.                       (ಡಿ.ಎಸ್.ಎಸ್.)

          (ಪರಿಷ್ಕರಣೆ: ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ